ಕುಮಾರಪಾಲ

 ಭಾರತದ ಇತಿಹಾಸದಲ್ಲಿ ಈ ಹೆಸರಿನಿಂದ ಪ್ರಸಿದ್ಧರಾದ ದೊರೆಗಳು ಇಬ್ಬರುಂಟು. ಒಬ್ಬ, ಬಂಗಾಳದ ಪಾಲವಂಶಸ್ಥ; ಇನ್ನೊಬ್ಬ, ಗುಜರಾತನ್ನಾಳುತ್ತಿದ್ದ ಅನ್ಹಿಲ್ವಾಡದ ಚೌಳುಕ್ಯ ವಂಶದ ಅರಸು.

 ಆನ್ಹಿಲ್ವಾಡದ ಚೌಳುಕ್ಯ ವಂಶದ ಕುಮಾರಪಾಲ : 1143 ರಿಂದ 1171-72 ರವರೆಗೆ ಗುಜರಾತಿನಲ್ಲಿ ಆಳುತ್ತಿದ್ದ ಪ್ರಸಿದ್ಧ ದೊರೆ. ಆ ವಂಶದ ಮೊದಲ ಅರಸರಲ್ಲೊಬ್ಬನಾದ ಕ್ಷೇಮರಾಜನ ಮೊಮ್ಮಗನಾದ ತ್ರಿಭುವನಮಲ್ಲನ ವೇಶ್ಯೆಯ ಪುತ್ರ. ಇವನಿಗೆ ಮುಂಚೆ ಆಳುತ್ತಿದ್ದ ಜಯಸಿಂಹ ಸಿದ್ಧರಾಜನಿಗೆ ಗಂಡು ಸಂತತಿಯಿರಲಿಲ್ಲ. ಆತ ತನ್ನ ಮಂತ್ರಿಯಾದ ಉದಯನನ ಮಗ ಬಾಹಡನನ್ನು ಉತ್ತರಾಧಿಕಾರಿಯಾಗಿ ಆರಿಸಿದ್ದ. ಕುಮಾರಪಾಲ ಆ ಸಿಂಹಾಸನದ ಹಕ್ಕುದಾರಲ್ಲೊಬ್ಬನಾದರೂ ಆತ ವೇಶ್ಯಾಪುತ್ರನೆಂಬ ಕಾರಣದಿಂದ ಅವನನ್ನು ದೇಶಭ್ರಷ್ಟನನ್ನಾಗಿ ಮಾಡಿ ಅವನ ತಂದೆಯನ್ನು ಕೊಲ್ಲಲಾಯಿತು. ಆದರೆ ಜಯಸಿಂಹನ ಮರಣಾನಂತರ ಕುಮಾರಪಾಲ ಬಾಹಡನನ್ನು ಸೋಲಿಸಿ ಸಿಂಹಾಸನವನೇರಿದ. ಶಕ್ತನಾದ ಕುಮಾರಪಾಲ ಚಾಳುಕ್ಯ ರಾಜ್ಯದ ಗಡಿಗಳನ್ನು ವಿಸ್ತರಿಸಿದುದಲ್ಲದೆ ತನ್ನ ವಿರೋಧಿಗಳಾಗಿದ್ದ ಮಂತ್ರಿಗಳನ್ನು ಕೊಲ್ಲಿಸಿದ.

 ಇವನ ಆಳ್ವಿಕೆಯ ಪೂರ್ವಾರ್ಧದಲ್ಲಿ ರಾಜ್ಯದ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿದ್ದ ಶತ್ರುಗಳು ತೊಂದರೆಯನ್ನುಂಟು ಮಾಡಿದರು. ಶಾಕಂಬರೀ ವಂಶದ ಚಾಹಮಾನ ಅರ್ಣೊರಾಜ ಉಜ್ಜಯಿನಿಯ ಬಲ್ಲಾಳ ಮುಂತಾದವರು ಬಾಹಡನ ಪಕ್ಷವಹಿಸಿ ಕುಮಾರಪಾಲನ ವಿರುದ್ಧವಾಗಿ ಯುದ್ಧ ಹೂಡಿದರು. ಕುಮಾರಪಾಲ ಅರ್ಣೊರಾಜನನ್ನು ಸೋಲಿಸಿ ಅವನ ಮಗಳನ್ನು ಮದುವೆಯಾಗಿ ಸ್ನೇಹ ಬೆಳೆಸಿದ. ಅನಂತರ ಪಾರಮಾರವಂಶದ ವಿಕ್ರಮಸಿಂಹನನ್ನು ರಾಜ್ಯಚ್ಯುತನನ್ನಾಗಿ ಮಾಡಿ ಅವನ ಸೋದರನ ಮಗನಾದ ಯಶೋಧವಲನನ್ನು ಪಟ್ಟಕ್ಕೆ ತಂದ. ತರುವಾಯ ಬಲ್ಲಾಳನನ್ನು ಎದುರಿಸಿ ಅವನನ್ನು ಕೊಂದ. 1150ರಲ್ಲಿ ತನ್ನ ರಾಣಿಯನ್ನು ಅವಮಾನಿಸಿದನೆಂದು ಪುನಃ ಚಾಹಮಾನ ಅರ್ಣೊರಾಜನನ್ನು ಸೋಲಿಸಿದರೂ ರಾಜನಾಗಿ ಮುಂದುವರಿಯಲು ಅನುಮತಿ ನೀಡಿದ. 1160-62ರ ಸುಮಾರಿನಲ್ಲಿ ಕೊಂಕಣದ ಮಲ್ಲಿಕಾರ್ಜುನ ಇವನಿಂದ ಹತನಾದ. ಅವನ ರಾಜ್ಯ ಕುಮಾರಪಾಲನ ವಶವಾಯಿತು. ಕುಮಾರಪಾಲ ತನ್ನ ಆಸ್ಥಾನಪಂಡಿತನಾದ ಹೇಮಚಂದ್ರನ ಪ್ರಭಾವಕ್ಕೊಳಗಾಗಿ ಜೈನಧರ್ಮ ಸ್ವೀಕರಿಸಿದನೆಂದು ಜೈನಕೃತಿಗಳು ತಿಳಿಸುತ್ತವೆ. 1164ಕ್ಕೆ ಮೊದಲೇ ಈ ಮತಾಂತರ ನಡೆದಿರಬೇಕೆಂದು ಆ ಕಾಲದ ಶಾಸನಗಳು ತಿಳಿಸುತ್ತವೆ. ಈತ ತನ್ನ ರಾಜ್ಯದಲ್ಲಿ ಪ್ರಾಣಿವಧೆಯನ್ನು ನಿಷೇಧಿಸಿದ್ದರಿಂದ ಬ್ರಾಹ್ಮಣರು ಧಾನ್ಯಗಳನ್ನು ಆಹುತಿಯಾಗಿ ಅರ್ಪಿಸಬೇಕಾಗಿತ್ತಂತೆ. ಈತ ಮತಾಂತರ ಹೊಂದಿದ ಮೇಲೂ ಜೈನ-ಬ್ರಾಹ್ಮಣ ಮತಗಳೆರಡಕ್ಕೂ ಸಮಾನ ಪ್ರೋತ್ಸಾಹ ನೀಡುತ್ತಿದ್ದ. ಉಯಿಲು ಬರೆದಿಡದೆ ಸತ್ತವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪದ್ಧತಿಯನ್ನೂ ಹೆಚ್ಚು ಪ್ರಚಾರದಲ್ಲಿದ್ದ ಜೂಜುಗಾರಿಕೆಯನ್ನೂ ನಿಷೇಧಿಸಿ ಈತ ಶಾಸನಗಳನ್ನು ಹೊರಡಿಸಿದ. ಕುಮಾರಪಾಲ 1171-72ರಲ್ಲಿ ಮೃತನಾದನೆಂದು ತಿಳಿದುಬರುತ್ತದೆ.

 ಬಂಗಾಳದ ಪಾಲವಂಶದ ಕುಮಾರಪಾಲ: ಈತ ಸು. 1120ರಲ್ಲಿ ಪಟ್ಟಕ್ಕೆ ಬಂದ. ಇವನು ರಾಮಪಾಲನ ಮಗ: ತಂದೆ ಗಂಗಾನದಿಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಾಗ ಸಿಂಹಾಸನಕ್ಕೆ ಬಂದ. ಬಂಗಾಳದ ಹೆಚ್ಚು ಪ್ರದೇಶಗಳೂ ಬಿಹಾರ ಮತ್ತು ಅಸ್ಸಾಮಿನ ಕೆಲವು ಭಾಗಗಳೂ ಇವನ ಆಳ್ವಿಕೆಗೆ ಸೇರಿದ್ದುವು. ಇವನ ಆಳ್ವಿಕೆಯ ಕಾಲದಲ್ಲಿ ಹಲವು ಮಾಂಡಲಿಕರು ಸ್ವತಂತ್ರರಾದರು. ಮಿಥಿಲೆಯ ನಾನ್ಯದೇವ ಇವನನ್ನು ಸೋಲಿಸಿದ. ಗಹಡವಾಲವಂಶದ ಗೋವಿಂದಚಂದ್ರ, ಕಳಚುರಿ ರತ್ನದೇವನ ಸಾಮಂತ ವಲ್ಲಭರಾಜ, ಕಳಿಂಗದ ಪೂರ್ವಗಂಗವಂಶದ ಅನಂತವರ್ಮ ಚೋಡಗಂಗ-ಇವರೂ ಕುಮಾರಪಾಲನನ್ನು ಸೋಲಿಸಿ ಈತನ ರಾಜ್ಯದ ಬಹುಭಾಗವನ್ನು ಕಬಳಿಸಿದರು. ಸೇನವಂಶದ ವಿಜಯಸೇನನೂ ಪ್ರಬಲನಾಗುತ್ತಿದ್ದ. ಕುಮಾರಪಾಲನ ದಳಪತಿಯಾಗಿದ್ದ ವೈದ್ಯದೇವ ಇವನಿಗೆ ದ್ರೋಹ ಬಗೆದ. ಮೊದಲು ಆತ ಕುಮಾರಪಾಲನಿಗೆ ವಿಧೇಯನಾಗಿಯೇ ಇದ್ದ. ಕಾಮರೂಪದ ದಂಗೆಯನ್ನಡಗಿಸಿದ ಮೇಲೆ ಅಲ್ಲಿಯ ಅಧಿಕಾರಿಯಾಗಿದ್ದು ಕ್ರಮೇಣ ಸ್ವತಂತ್ರನಾದ. ಹೀಗೆ ಎಲ್ಲ ಸುತ್ತಿನಿಂದಲೂ ಆವರಿಸಿದ ಕಷ್ಟಪರಂಪರೆಗಳನ್ನು ಎದುರಿಸುವ ಶಕ್ತಿಯಿಲ್ಲದ ಕುಮಾರಪಾಲ 1125ರ ಸುಮಾರಿನಲ್ಲಿ ಮೃತನಾದಾಗ ಪಾಲರಾಜ್ಯ ಮುಂದುಗಾಣದ ಸ್ಥಿತಿಗೆ ಬಂದಿತ್ತು.

 
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ